Saturday 18 May 2013

ಇದ್ದ ಒಂದಷ್ಟು ಆಸೆಗಳ ಕಳೆದುಕೊಂಡೆ 
ಏನೂ ಇಲ್ಲವೆಂಬ ಅರ್ಥದಲಿ 
ಮತ್ತೆ ಹುಡುಕುವುದರಲ್ಲಿ ಅರ್ಥವಿರಲಿಲ್ಲ 
ಅದರೂ ಬಿಡದೆ ಕಾಡುತಿತ್ತು
ಅದರ ಹೆಜ್ಜೆ ಸೆಳೆತ

ಕಣ್ಣೀರು 


ನೀನೆ ಸರಿ ಗೆಳತಿ 
ಮತ್ತೊಬ್ಬರ ಕಣ್ಣ ಹನಿಯ ಭಾಷೆ ಅರ್ಥೈಸುವೆ
ಚದುರಿ ಹೊರ ಬಿದ್ದೆ 
ಅವಳ ಕಣ್ಣ ಹನಿಗೆ ಜೊತೆಗೂಡಿಸಲು 
ಯಾರ ಅಪ್ಪಣೆಗೂ ಕಾಯದಂತೆ


ಹೆಜ್ಜೆ ನೆನಪು

ಹರಿದು ಹಂಚಿಕೊಂಡಿದ್ದರು
ಅವನ ಜೀವನವ 
ಕೂಡಿಕೊಳ್ಳಲ್ಲಿಲ್ಲವೆಂದು
ದೂರಿದರು 

ನಡೆಯಲು ಬಿಟ್ಟರು
ಮುಳ್ಳಿನ ಹಾದಿಯಲಿ 
ಎಡುವುತ್ತ ನಡೆಯುತಿಹನೆಂದು
ಮತ್ತೆ ದೂರಿದರು 
ಅವನ ಕಾಲಲ್ಲಿ
ಉಸುರುತ್ತಿದ್ದ ರಕ್ತವು ಕಾಣದೆ

ಹಾದಿ ಸಾಗಿದರೇನು ಬಂತು
ಕಾಲಿಂದ ಮೂಡಿದ್ದವು
ರಕ್ತ ಕಲೆಗಳ ಹೆಜ್ಜೆ ಗುರುತು
ಮರೆತುಬಿಡಲು ಹಳಸಿದನು
ಒಣಗಿ ಉಳಿದಿತ್ತು ರಕ್ತ ಚೆಲ್ಲಿದ ಹೆಜ್ಜೆ ನೆನಪು

Friday 3 May 2013

ಮೂಕ ಭಾಷೆ





"ಅಜ್ಜಿ... ತಾತ ಎಲ್ಲಿ???" 
ಊರಿಗೆ ಹೋಗಿ ಒಂದು ಗಂಟೆ ಆಗಿತ್ತು ... ಮನೆಯ ಎಲ್ಲರನ್ನು ಒಂದು ಕಡೆಯಿಂದ ಮಾತನಾಡಿಸಿಕೊಂಡು ಬಂದಿದ್ದೆ... ತಾತ ಮಾತ್ರ ಸಿಕ್ಕಿರಲಿಲ್ಲ... 
"ನಿಮ್ಮ ತಾತ ಮನೆಯಲ್ಲಿ ಸಿಕ್ಕುತ್ತಾ... ತೋಟಕ್ಕೆ ಹೋದರೆ ಅಲ್ಲಿ ಇರ್ತಾರೆ ನೋಡು, ಈಗ ತಾನೆ ನಿನ್ನ ಅಮ್ಮ,ಅಣ್ಣ  ಕೂಡ ತೋಟಕ್ಕೆ ಹೋದರು ನೋಡು... ನೀನು ಹೋಗು... ಅಲ್ಲಿ ಸಿಕ್ತಾರೆ " ಅಂತ ಹೇಳಿ ಅಜ್ಜಿ ಅವಳ ಕೆಲಸ ಮುಂದುವರೆಸಿದಳು... 
ನನ್ನ ಬಿಟ್ಟು ಅಗಲೆ ತೋಟಕ್ಕೆ ಹೊದ್ರ... ಅಂತ ಮನದಲ್ಲೇ ಹುಸಿ ಕೋಪ ಮಾಡಿಕೊಂಡು ನಾನು ತೋಟಕ್ಕೆ ಹೊರಟೆ.... ... 
ನಮ್ಮ ತೋಟ ಮನೆಯ ಪಕ್ಕದಲ್ಲೇ ಇತ್ತು... ತೋಟ ನೋಡುವ ಖುಷಿ.....
ತೋಟದ ಒಳಗೆ ಕಾಲಿಟ್ಟ ಮೊದಲ ಹೆಜ್ಜೆ ನನ್ನ ಮೊದಲ ನೋಟ ಅಲ್ಲೆ ಮೊದಲು ಎದುರುಗೊಳ್ಳುತಿದ್ದ ಒಂದಷ್ಟು ಹೂವಿನ ಗಿಡಗಳು, ಹಸಿರಾಗಿ ಬೆಳೆದು ನಿಲ್ಲುತಿದ್ದ ಜಾಗ ಕಂಡಿತು... ಹಸಿರ ರಾಶಿಗೆ  ನೀರು ಹಾಯಿಸುವ ಕಾಲುವೆಯಲ್ಲಿ ಗುಬ್ಬಚ್ಚಿ ಗೂಡುಗಳನ್ನ ಕಟ್ಟಿ ಆಡುತಿದ್ದ ನೆನಪಾಯ್ತು .... ಇಂದು ಹೂವಿನ ಗಿಡಗಲಳಿರಲಿಲ್ಲ.. ಅದರೆ ಅದರ ಸವಿ ನೆನಪು ಮಾತ್ರ ಹಸಿರಾಗಿತ್ತು.. ಆಗಾಗ ನೀರೆರೆದು ಪೋಷಿಸುತಿತ್ತು.. 
ಹಾಗೆ ಮುಂದೆ ಸಾಗಿದಾಗ ಕಂಡದ್ದು ಒಂದು ದೊಡ್ಡ ಬಂಡೆ.... ಅಜ್ಜಿ ಮತ್ತು ನಾವು ಒಂದಷ್ಟು ಮಕ್ಕಳು ಸೇರಿ ಪಗಡೆ ಆಡುತಿದ್ದ ಜಾಗ... 
ಅಕ್ಕ ಪಕ್ಕ ಅಡಕೆ ತೋಟದ ಸಾಲು... ಅದಕ್ಕೆ ನೀರು ಬಿಡುವ ಕರ್ತವ್ಯ ಇರುವಂತೆ ಹರಿಯುತಿದ್ದ ಕಾಲುವೆಗಳು ... 
ಹಾಗೆ ಬದಿಯಲ್ಲಿ ಕಂಡದ್ದು ಮುತ್ತಜ್ಜಿಯ ಸಮಾಧಿ .... ಅಜ್ಜಿಗೆ ನಮಸ್ಕರಿಸಿ ಮುಂದೆ ಹೊರಟೆ........ 
ಒಂದು ಕಾಲದಲ್ಲಿ ನೀರಿನಿಂದ ತುಂಬಿ ಹರ್ಷಿಸುತ್ತಿದ್ದ ಬಾವಿ ಕಂಡಿತು... ಇಣುಕಿ ನೋಡಿದೆ... ನೆಲದ ಮಟ್ಟದಲ್ಲಿ ಸ್ವಲ್ಪ ನೀರು ಕಂಡಿತು... 
ನಾನು ತಲುಪಬೇಕಾದ ಜಾಗ ಸಿಕ್ಕಿತ್ತು.. ಅಮ್ಮ ಅಣ್ಣ ಆಗಲೇ ಬಂದು ಕುಳಿತಿದ್ದರು....  
ಕೊಟ್ಟಿಗೆ ಇತ್ತು.... ತಾತ ಎಮ್ಮೆಗಳನ್ನು ಮತ್ತು ಹಸು ಗಳನ್ನು ಸಾಕಿದ್ದರು.... ತಾತನಿಗೆ ಒಬ್ಬ ಸಹಾಯಕ ಕೂಡ ಇದ್ದ... 
ತಾತ ಅಲ್ಲೆ ಹೊಂಡದಲ್ಲಿ ಹಸುಗಳಿಗೆ ಸ್ನಾನ ಮಾಡಿಸುತ್ತಿದ್ದರು.. ಆಗಾಗಿ ಅಲ್ಲೆ ಅಮ್ಮ ಅಣ್ಣನ ಪಕ್ಕ ಹೋಗಿ ಕುಳಿತೆ 
ನನ್ನ ದೂರದಿಂದಲೇ ನೋಡಿ ಮಾತನಾಡಿಸಿದರು... 
ಒಂದಷ್ಟು ವರ್ಷಗಳ ಹಿಂದೆ ಇದೇ ತಾತ ಮನೆಯಲ್ಲಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು... ಅಂಗಡಿ ಬಿಟ್ಟು ಕದಲುತ್ತಿರಲಿಲ್ಲ..  ಸಣ್ಣ ವಿಷಯಕ್ಕೆಲ್ಲ ಕೋಪಿಸಿಕೊಳ್ಳುತ್ತಿದ್ದ ತಾತನನ್ನು ಮಾತನಾಡಿಸುವ ದೈರ್ಯ ಆಗ ಇರಲ್ಲಿಲ್ಲ... ಆದರೆ ಈಗ ತಾತನ ನಡವಳಿಕೆ ಪೂರ್ತಿ ಬದಲಾಗಿತ್ತು... ಒಂದಷ್ಟು ಗಾಂಭಿರ್ಯ ಕಾಣುತಿತ್ತು... ಪ್ರೀತಿ ವಿಶ್ವಾಸ ಕಾಣುತ್ತಿತ್ತು .. ಎಲ್ಲಕಿಂತ ಒಂದಷ್ಟು ಮೌನಕ್ಕೆ ಶರಣಾಗಿದಂತೆ ಕಾಣುತ್ತಿದ್ದರು... 

ಹಸುಗಳಿಗೆ ಮೈ ತೊಳೆದು ನಮ್ಮನ್ನು ಮಾತನಾಡಿಸಲು ಬಂದರು... ಅಮ್ಮ ತಾತ ಉಭಯ ಕುಶಲೋಪರಿ ವಿಚ್ಚಾರಿಸಿಕೊಂಡು ಕುಳಿತರು.. ತೋಟದ ಬಗ್ಗೆ ಹಸುಗಳ ಬಗ್ಗೆ ಹೇಳಿದರು... 
ಇದನ್ನ ಕೇಳಿಸಿಕೊಳ್ಳುತಿದ್ದ ಅಣ್ಣ "ತಾತ ನಾನು ಸ್ವಲ್ಪ ಭೂಮಿ ತಗೊಂಡು ಕೃಷಿ ಕೆಲಸ ಮಾಡ್ಬೇಕು ಅಂತ ಆಸೆ" ಎಂದು ಹೇಳಿದ .... 
ತಕ್ಷಣ ಪಕ್ಕದಲ್ಲೇ ಕೂತಿದ್ದ ಅಮ್ಮ "ಏನಪ್ಪಾ .. ಓದಿರೋದು ಇಂಜಿನಿಯರಿಂಗ್.. ಇರೋದು ಬೆಂಗಳೂರನಲ್ಲಿ .. ನೀನು ಭೂಮಿ ತಗೊಂಡು ಕೃಷಿ ಕೆಲಸ ಮಾಡ್ತಿಯಾ ??" ಅಂತ ಆಡಿಕೊಂಡು ನಕ್ಕರು... 
"ಯಾಕ್ ಚಿಕ್ಕಮ್ಮ ನಗ್ತಿಯಾ?? "ಎಂದು ಪ್ರಶ್ನಾರ್ತಕವಾಗಿ ಅಮ್ಮನ ಮುಖ ನೋಡಿದ... 
"ಮತ್ ಇನ್ನೇನು .. ನಿನಗೆ ಏನ್ ಗೊತ್ತಾಗುತ್ತೆ ಉಳುಮೆಯ ಬಗ್ಗೆ.. ನೀನ್ ಉಳುಮೆ ಮಾಡಿದರೆ ಮುಗಿತು ಒಂದು ಚೀಲ ಕೂಡ ಸರಿಯಾಗಿ ಭತ್ತ ಸಿಗೋಲ್ಲ" ಎಂದು ನಕ್ಕಿದರು..
ಸುಮ್ಮನಿದ್ದ ಅಜ್ಜ "ಯಾಕಮ್ಮ ನಗ್ತೀಯಾ... ಉಳುಮೆ ಮಾಡುದು ಏನು ಕಷ್ಟ ಅಲ್ಲ.. ಒಂದಷ್ಟು ಶ್ರದ್ದೆ ಇರಬೇಕು... "
"ಉಳುಮೆ ಮಾಡಿಸಿಕೊಳ್ಳುವ ಭೂಮಿ ತಾಯಿನೇ ಎಲ್ಲ ಕಲಸ್ತಾಳೆ.... "
"ಈಗ ಮಳೆ ಬಂತು ಬೀಜ ಹಾಕು..."
"ಈಗ ಪೈರನ ತಗೊಂಡು ಭೂಮಿಯಲ್ಲಿ ಇಡು..."
" ನೀರು ಹಾಯಿಸು .."
"ಬೆಳೆದಿರೋ ಕಳೆನ  ಕಿತ್ತು ಸ್ವಚ್ಛ ಮಾಡು.. "
"ಗೊಬ್ಬರ ಬೇಕಾದಾಗ ಅವಳೇ ಕೇಳ್ತಾಳೆ "
"ಕೊನೆಗೆ ಬೆಳೆ ಬಂದಿದೆ ... ಈಗ ಕಿತ್ತು ... ಭತ್ತ ರಾಶಿ ಹಾಕು ಎಂದು ಅವಳೇ ಕೇಳಿ ಮಾಡಿಸಿಕೊಳ್ತಾಳೆ" ಅಂತ ಹೇಳಿದರು... 
ಮತ್ತೆ ಅಣ್ಣ ಅಜ್ಜನ ಮಾತು ಕೇಳುತ್ತ ಹಸುಗಳ ಕಡೆ ನೋಡಿದ... "ತಾತ , ನನಗೆ ಹಸುಗಳೆಂದರೆ ಇಷ್ಟ .. ಇಲ್ಲಿ ಒಂದು ಹಸು ಗೆ ಎಷ್ಟು ಬೆಲೆ?? ನನಗೆ ಹಸುಗಳನ್ನ ಸಾಕ ಬೇಕು ಅಂತ ಆಸೆ" ಎಂದು ಮತ್ತೆ ಅದೇ ಸ್ವರದಲ್ಲಿ ಹೇಳಿದ... 
ಇದನ್ನ ಕೇಳಿದ ಅಮ್ಮ ಮತ್ತೆ ಜೋರಾಗಿ ನಕ್ಕು " ಏನೋ .. ನೀನು ಹಸುಗಳನ್ನ ಕೊಂಡುಕೊಳ್ತಿಯಾ?? ನೀನು ಹಸು ಸಾಕ್ತಿಯ ?? ಅದಕ್ಕೆ ಯಾವಾಗ ಹುಲ್ಲು ಹಾಕಬೇಕು .. ಎಷ್ಟು ಹಾಕಬೇಕು ಅನ್ನೋದೆ ಗೊತ್ತಿಲ್ಲ.. ಅದಿರ್ಲಿ ಹಸುಗಳನ್ನ ಮನೆ ಪಕ್ಕ ಕಟ್ಕೊಳ್ತಿಯಾ??" ಅಂತ ಮತ್ತೊಮ್ಮೆ ಹಾಸ್ಯ ಮಾಡಿದರು... 
ಇದನ್ನು ಕೇಳಿಸಿ ಕೊಂಡ  ತಾತ " ಏನ್ ಇಲ್ಲಪ್ಪ .. ಹಸುನ ಸಾಕೊದೋ ಕಷ್ಟ ಅಲ್ಲ.. ಅದು ಗೋಮಾತೆ.. ಗೋತಾಯಿ ಅದೇ ನಮ್ಮನ್ನ ಕೇಳುತ್ತೆ... "
" ಹೊಟ್ಟೆ ಹಸಿದಾಗ 'ಅಂಬಾ....' ಅಂತ ಕೂಗಿ ಕರೆದು ಹುಲ್ಲು ಹಾಕು ಅಂತ ಹೇಳುತ್ತೆ... "
"ನೀರು ಬೇಕಾದಾಗ ಅದೇ ನೀರ ಹತ್ರ ಕರೆದು ಕೊಂಡು ಹೋಗುತ್ತೆ.. ನೀರು ಕುಡಿದು ತೃಪ್ತಿ ಆದ ನಂತರ ಮೈ ಉಜ್ಜಿ ತೃಪ್ತಿ ವ್ಯಕ್ತ ಪಡಿಸುತ್ತೆ.. "
"ಕೆಚ್ಚಲಲ್ಲಿ ಹಾಲು ತುಂಬಿದ್ದಲ್ಲಿ ಅದೇ ಕರಿಯುತ್ತೆ .. ಹಾಲು ಕರೆದುಕೋ ಎಂದು ಹೇಳುತ್ತೆ ..."
"ಅದು ಪ್ರಾಣಿ ಅದ್ರು .... ಅದರದೇ ಭಾಷೆಯಲ್ಲಿ ಕಲಿಸಿಕೊಡುತ್ತೆ .." ಅಂತ ಹೇಳುತ್ತಾ ಅಣ್ಣನ ಆಸೆ ತುಂಬಿದ್ದ ಕಣ್ಣುಗಳನ್ನ ನೋಡುತ್ತಾ ಅಣ್ಣನ  ಬೆನ್ನು ತಟ್ಟಿದರು... 
ಅಷ್ಟರಲ್ಲಿ ಹಸುವೊಂದು "ಅಂಬಾ ...." ಎಂದು ಕೂಗಿತು ... 
ತಾತ "ನೋಡು....  ತಾಯಿ ಕರಿತಾ ಇದಾಳೆ " ಅಂತ ಹೇಳಿ ನಕ್ಕು ಎದ್ದು ಒಂದಷ್ಟು ಹುಲ್ಲನ್ನು ಕೈಲಿ ಹಿಡಿದು ಹೊರಟರು .. 
ಹತ್ತಿರ ಬಂದ ಅಜ್ಜನ ಕೈಯಲ್ಲಿ ಸವರಿಸಿಕೊಳ್ಳುವುದಕ್ಕೆ ಮುಂದೆ ಬಂದವು .. 
ಅಜ್ಜನ ಮುಖ ಹಸುಗಳ ಶಾಂತ ಸ್ವಭಾವಾದಲ್ಲಿ ಲೀನವಾದಂತೆ ಕಂಡಿತು .... 
ಅವುಗಳ ಮೂಕ ಭಾಷೆ ಅರ್ಥವಾಗದೆ ನಾನು, ಅಮ್ಮ ,ಅಣ್ಣ ಸುಮ್ಮನೆ ನೋಡುತ್ತ ಕುಳಿತೆವು...... !!!!!