Sunday, 21 April 2013


ಹಸಿವು... 

ಹೇಳದೆ ಉಳಿದಿತ್ತು ಒಂದಷ್ಟು ಹಸಿವು 
ಮತೊಬ್ಬರ ಸ್ನೇಹ ಕಂಡಾಗ 
ಅವಳ ಸ್ನೇಹದ ಕ್ಷಣಗಳು ನೆನಪಾಗಿ 
ರಮಿಸಿ ನಿಲ್ಲುತ್ತಿತ್ತು..... 
----------------------------------------------------------------------------------------------------------------------------
ನಿದ್ರೆ..... 

ಅವಳು ಬರೆದಿದ್ದ ಒಂದಷ್ಟು 
ಪ್ರೇಮ ಪತ್ರಗಳು
ಮುದುಡಿ ಮಲಗಿದ್ದವು ಪೆಟ್ಟಿಗೆಯಲ್ಲಿ 
ಇವನು ಇಟ್ಟಿದ್ದ ಹಣದ ಕಂತೆಯ ಕೆಳಗೆ 
---------------------------------------------------------------------------------------------------------------------------
ಪ್ರೀತಿ ..... 

ಅವಳ ಪ್ರೀತಿ ಸವಿದೆನೆಂದ ಬೆಳದಿಂಗಳ ರಾತ್ರಿಯಲಿ 
ಅಮ್ಮನ ನೆನಪಾಗಿ ಕಣ್ಣಿರಿಟ್ಟಾಗ 
ಅವಳು ತುತ್ತು ಮಾಡಿ 
ಹುಣ್ಣಿಮೆಯ ಚಂದ್ರನ 
ತೋರಿಸಿ ತಿನ್ನಿಸಿದಾ ತುತ್ತುಗಳ ನೆನಪಾಗಿ.... 
--------------------------------------------------------------------------------------------------------------------------

ಸವಾಲು 

ಸವಾಲು ಒಡ್ಡಿ ನಿಂತಿರುವೆ
ನಡು ರಾತ್ರಿಯಲಿ
ನಿನ್ನ ಸವಿ ಸ್ನೇಹದ ಕ್ಷಣಗಳ
ಕನಸಲ್ಲಿ ನೆನೆಸುತ್ತ
 

Thursday, 18 April 2013

ಹ(ಹಾ)ಳೆ ಬರಹಗಳು

ಹೊಸ ಹಾದಿಯಲ್ಲಿ 
ನವಚೈತನ್ಯಕ್ಕಾಗಿ
ಹುಡುಕುತ್ತಾ ಹೊರಟವಳಿಗೆ 
ಹಳೆಯವೆ ಹೊಸತಾಗಿ ಸ್ವಾಗತಿಸಿತ್ತು... !!



ಅವಳ ನೆನಪು ಮರೆತು ಮಲಗಲು 
ಫ್ಯಾನ್ ಹಾಕಿದೆ
ಅವಳೇ ಗಿರಕಿ ಹೊಡೆದು ಕಾಡಿದಳು 
ಕನಸಿನ ಲೋಕದಲ್ಲಿ ..........



ಸ್ವಾರ್ಥತೆ ಇರಬೇಕು 
ತನಗೆ ಗೊತ್ತಿದ್ದು.... ಮತ್ತೊಬ್ಬರಿಗೆ ಗೊತ್ತಾಗದಂತೆ..
ಪ್ರೀತಿ ಇರಬೇಕು 
ತನಗರಿವಿಲ್ಲದಂತೆ ಮತ್ತೊಬ್ಬರ ಹೃದಯದಲ್ಲಿ ಸ್ಥಾನ ಪಡೆಯುವಂತೆ 
ಸ್ನೇಹ ಇರಬೇಕು 
ನೋಡಿದವರಿಗೆ ಸ್ನೇಹಸಂಗಮ ಅದ್ಭುತವೆನಿಸುವಂತೆ .........



ನನ್ನವರೆನ್ನುವವರಿಲ್ಲ 
ಈ ಜಗದಲಿ 
ಕಳೆದಿಹೆ ಎಲ್ಲರನು 
ಹುಡುಕುತ್ತಾ ಹೊರಟಿಹೆನು 
ಹಿಡಿದ ಹಾದಿಯು 
ತುಂಬಿತ್ತು ಕಣ್ಣೀರ ಸ್ವಾಗತದಲಿ



ಯಾವ ತಪ್ಪಿಗಾಗಿ ಶಿಕ್ಷೆ ..!!!
ಕಪ್ಪು ಬಣ್ಣದ ಚರ್ಮಕ್ಕೋ?
ಸ್ವಸ್ಥ ಮನಸ್ಸಿನ ಕೆಲಸಕ್ಕೋ??



ಪುಟಾಣಿ ಹೆಜ್ಜೆಗಳು ಮೂಡುವವು 
ನೀರಿನ ಅಲೆಯಲ್ಲಿ 
ಉಳಿಯದೇ ಹೋದವು 
ಮತ್ತೆ ಹೆಜ್ಜೆ ಮೂಡಿಸುವ ಆತುರದಲ್ಲಿ 
ಹುಟ್ಟಿದಾ ಹೆಜ್ಜೆಯ ಗುರುತು ಉಳಿಯದಂತೆ....!



ಇಷ್ಟವೆಂಬ ಕಷ್ಟಗಳಿಗೆ 
ಮಣೆ ಹಾಕುತ್ತ ಹೊರಟೆ 
ಏರಿದರೇನು ಸುಖ 
ತುತ್ತ ತುದಿಯಲ್ಲೂ ಹುಡುಕಿದೆ 
ಕೊನೆಗೂ ಕಾಣದಾದೆ 
ನನ್ನ ಇಷ್ಟವೆಂಬ ಇಷ್ಟಗಳ......!!!



ಹರಿವ ಕಾಲುವೆಯಲಿ 
ಮಣ್ಣಾಗಿ ಉಳಿದಿಹೆ 
ಗುಬ್ಬಚ್ಚಿ ಗೂಡಿನ ನೆನಪು 
ಒಂದಷ್ಟು ಖುಷಿಗಳ ಹೊತ್ತು ಕುಳಿತು 
ನಾ ಇಟ್ಟ ಹೆಜ್ಜೆಗಳ ನೆನಪಿಸುತ್ತಾ



ಯುದ್ಧಕ್ಕೆ ನಿಲ್ಲದಿರು ಮನವೆ 
ಏಕಿಷ್ಟು ಹವಣಿಕೆ...!! 
ಸೋತಿಹೆನು ಎಂದೋ 
ಕಳೆದುಕೊಂಡ ಭರದಲ್ಲಿ 
ಬಾಗಿ ಕುಳಿತಿರುವೆ 
ಒಂದಷ್ಟು ಸೋಲುಗಳ ಭಾರದಲ್ಲಿ

Friday, 15 March 2013

ಅಕ್ಷರ ರೂಪ




ಪೇಟೆಯಿಂದ ಹಳ್ಳಿಯ ಮನೆಗೆ ಬಂದಿದ್ದ ಮಗಳ ಮಗನನ್ನು .. ಮನೆಯಲ್ಲೇ ಇದ್ದ ಮಗನ ಮಗನನ್ನು ಜೊತೆಯಲ್ಲಿ ಕರೆದುಕೊಂಡು ತೋಟಕ್ಕೆ ಸುತ್ತಾಡಿ ಬರಲು ಹೊರಟ.... ಮಗಳ ಮಗನ ಮೇಲೆ ಸ್ವಲ್ಪ ಪ್ರೀತಿ ಹೆಚ್ಚಿದ್ದ ಕಾರಣ ಅಜ್ಜ ಮಗಳ ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು.. ಮಗನ ಮಗನನ್ನು ಕೈ ಹಿಡಿದು ನಡೆಸಿಕೊಂಡು ಹೊರಟ....
ತೋಟದ ಒಂದು ಭಾಗದಲ್ಲಿ ಬೇರೆ ತೋಟದ ಒಂದು ಹಸು ಮುಳ್ಳಿನ ಬೇಲಿ ದಾಟಿ ಹೊಲದಲ್ಲಿ ಗಿಡ ಮೇಯುತಿತ್ತು.... ಅದನ್ನು ನೋಡಿದ ಹೆಗಲ ಮೇಲಿದ್ದ ಮಗಳ ಮಗ "ತಾತ ನಿಮ್ಮ ಹೊಲದಲ್ಲಿ ಯಾವ್ದೋ ಬೇರೆ ಹಸು ಬಂದಿದೆ......" ಅಂತ ಕೂಗ್ತಾನೆ...
ಅದೇ ಸಮಯಕ್ಕೆ ಕೈ ಹಿಡಿದು ಪುಟ್ಟ ಪುಟ್ಟ ಹೆಜ್ಜೆ ಹಾಕೊಂಡು ನಡೆದು ಬರುತಿದ್ದ ಮಗನ ಮಗ "ತಾತ ನಮ್ಮ ಹೊಲದಲ್ಲಿ ಯಾವ್ದೋ ಬೇರೆ ಹಸು ಬಂದಿದೆ...." ಅಂತ ಕೂಗ್ತಾನೆ....
ತಕ್ಷಣ ಅಜ್ಜ ಮಗಳ ಮಗನನ್ನು ಕೆಳಗೆ ಇಳಿಸಿ ಮಗನ ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ಮುಂದೆ ಸಾಗಿದ...

ಪ್ರೀತಿಯ ಸಾಲು...





ಅವಳಿಗೆ ಹೇಳಬೇಕೆಂದು ಪೊಣಿಸಿಟ್ಟಿದ್ದ ಒಂದಷ್ಟು ಮಾತುಗಳು ಹೇಳದೆ ಉಳಿದವು....,
ಅವಳು ಮತ್ತೊಬ್ಬನ ಹೃದಯದ ಮಾತುಗಳನ್ನ ಆಲಿಸಿದಳೆಂದು ತಿಳಿದಾಗ.........

ತನ್ನದೇ ಚೌಕಟ್ಟು ಎಂದು ನಿರ್ಮಿಸಿಕೊಂಡ ಗೋಡೆಯನ್ನು 
ತಾನೆ ಕೆಡವಿದಳು ಆಚೆಯಿಂದ ಕೂಗಿದ ಅವನ ಪ್ರೀತಿಯ ದನಿಗೆ....

ತಾನು ಪ್ರೀತಿಸಿದವಳು ಗೋರಿ ಸೇರಿದಳೆಂದು ತಿ.ಳಿದಾಕ್ಷಣ 
ಅವನ ಮನದಲ್ಲಿನ ಅವಳ ಪ್ರೀತಿ ಮತ್ತು ನೆನಪುಗಳು ಉಸಿರಾಡಿದವು......

ರಕ್ತದಲ್ಲಿ ಬರೆದುಕೊಟ್ಟ ಪ್ರೇಮ ಪತ್ರಕ್ಕೆ ಬೈದವಳು...... 
ಅವನೇ ರಕ್ತವಾಗಿ ಹರಿದಾಗ ಮೌನ ತಾಳಿದಳು......

ನಿನ್ನ ನೆನಪು ನನ್ನಲ್ಲಿ ಸತ್ತುಹೋಗಿದೆ ಎಂದು ಹೇಳ ಹೊರಟವನಿಗೆ 
ಅವಳ ಮುಂದೆಯೇ ನಿಲ್ಲುವಂತೆ ಮಾಡಿತ್ತು ಎಲ್ಲೋ ಅಡಗಿದ್ದ ಅವಳ ನೆನಪು........

Friday, 1 March 2013



ತನ್ನ ಪ್ರೀತಿಸಿದ ಹೃದಯವನ್ನು
ಬಡಿದೆಬ್ಬಿಸಲು ಹೊರಟವಳು
ತಾನೆ ಶವವಾಗಿ ಕಂಡಳು ತನ್ನನ್ನು
ಪ್ರೀತಿಸಿದ ಹೃದಯಗಳಿಗೆ

ದೃಷ್ಟಿಬೊಟ್ಟು ...........


ಅಮ್ಮ ಇಡುವಳು ತನ್ನ
ಕಂದನಿಗೆ ಕಪ್ಪು ಚುಕ್ಕಿಯನು 
ದೃಷ್ಟಿಯಾಗದಿರಲೆಂದು 
ದೇವರಿಟ್ಟಿಹನು ನಿನ್ನನು ಆಕಾಶಕ್ಕೆ 
ಬಿಳಿಯ ಚುಕ್ಕಿಯಾಗಿ
ಎಲ್ಲರ ದೃಷ್ಟಿ ನಿನ್ನ ಮೇಲಿರಲೆಂದು