Thursday, 6 June 2013

ಸ್ಮಶಾನ ಮೌನ"ಹೇ , ಇದು ನನ್ನ ಜಾಗ, ಇಲ್ಲಿ ಯಾಕೆ ಗೀಚುತ್ತಿದ್ದಿಯಾ??"
ಗಡಸು ದ್ವನಿ ಬಂದತ್ತ ತಿರುಗಿದಳು ಭಾವನ....
ಎದುರಿಗೆ ಹರ್ಷಿತ ನಿಂತಿದ್ದಳು...
ಸುತ್ತಲು ತಿರುಗಿ ತಾನೇನು ಅವಳು ಆಡುತಿದ್ದ ಜಾಗದಲ್ಲಿ ಕುಂಟೆಬಿಲ್ಲೆ ಗೀಚುತ್ತಿರಲಿಲ್ಲ ಎಂಬುದು ಖಾತರಿ ಮಾಡಿಕೊಂಡಳು..
ಪ್ರಶ್ನೆ ಮಾಡಿದವಳ ಮುಖದಲ್ಲಿ ಕೋಪ ಅಡಗಿತ್ತು...
"
ನೋಡು, ನೀನು ಆಡುತಿದ್ದ ಜಾಗದಲ್ಲಿ ನಾನು ಆಡುತ್ತಿಲ್ಲ .. ನಿನ್ನ ಜಾಗ ಅದು" ಎಂದು ಬೆಟ್ಟು ಮಾಡಿ ದೂರದಲ್ಲಿ ಮತ್ತೊಂದು ಜಾಗ ತೋರಿಸಿದಳು...
ಹರ್ಷಿತಾ "ಇರಬಹುದು.. ನಾನು ನಿನ್ನೆ ಅಲ್ಲಿ ಆಡಿದ್ದೆ .. ಇಂದು ಇಲ್ಲಿ ಆಡುತ್ತೇನೆ" ಎಂದು ಜಗಳಕ್ಕೆ ತಯಾರಿ ನಡೆಸೆ ಬಂದಿದ್ದಳು.. ಏಕೋ ಇದು ಅವಳ ಅಸಭ್ಯ ವರ್ತನೆಯೆಂದು ಕಂಡಿತು ಭಾವನಾಳಿಗೆ ... ಮಾತಿನಲ್ಲಿ ಹಿಂದೆ ಸರಿಯಲಿಲ್ಲ ...
ಕೊನೆಗೆ ಹರ್ಷಿತಾ ಕೋಪ ತಾಳಲಾಗದೆ, ಮಾತಿನಲ್ಲಿ ಗೆಲ್ಲಲಾಗದೆ ಭಾವನಾಳ ಗಲ್ಲ ಹಿಡಿದು "ಹೇ , ಏನೇ .... ಬೆಳಗ್ಗೆ ಗಣಿತದ ಮೇಸ್ಟ್ರು ನಿನ್ನ ತರಗತಿಯಲ್ಲಿ ಹೊಗಳಿದರು ಅಂತ ಉಬ್ಬಿ ಹೋಗಿದ್ಯಾ?" ಎಂದು ಮೂತಿ ತಿವಿದು ಗಲ್ಲ ತಳ್ಳಿ "ಮಧ್ಯಾಹನ್ನ ತರಗತಿಯಲ್ಲಿ ನೋಡಿಕೊಳ್ಳುತ್ತೇನೆ" ಎಂದು ಎಚ್ಚರಿಕೆಯನಿತ್ತು ಮುಂದೆ ಸಾಗಿದಳು....

ಬೆಳಗ್ಗೆ ಗಣಿತದ ತರಗತಿಯಲಿ ಮೇಸ್ಟ್ರು ಮೊದಲ ಕಿರುಪರೀಕ್ಷೆಯ ಅಂಕಗಳನ್ನ ಹೇಳಿದ್ದರು .. ಭಾವನಾಳಿಗೆ ಪೂರ್ಣ ಅಂಕಗಳು ದೊರೆತ್ತಿದ್ದವು.. ಹರ್ಷಿತಾಳಿಗೆ ಒಂದು ಅಂಕ ಕಡಿಮೆ ದೊರೆತಿತ್ತು.... ಮೇಸ್ಟ್ರು ತರಗತಿಯಲ್ಲಿ ಭಾವನಾಳನ್ನು ನಿಲ್ಲಿಸಿ ಅಭಿನಂದಿಸಿದ್ದರು... ಇದು ಹರ್ಷಿತಾಳ ಕೋಪಕ್ಕೆ ಕಾರಣವಾಗಿತ್ತು.... ಮತ್ತು ತರಗತಿಯ ನಾಯಕಿಯಾಗಿದ್ದ ಅವಳಿಗೆ ಅವಮಾನಕರ ಘಟನೆ ಎನಿಸಿತು.... 

ಮಧ್ಯಾಹ್ನ ಊಟದ ಸಮಯ ಮುಗಿಸಿ ಎಲ್ಲ ಮಕ್ಕಳು ತರಗತಿಗೆ ಹಿಂತಿರುಗಿದರು.... ವಿಜ್ಞಾನ ತರಗತಿಯಲ್ಲಿ ಮೇಸ್ಟ್ರು ಎಲ್ಲರಿಗು ಪ್ರಶ್ನೆ ಕೇಳುವಂತೆ ತರಗತಿಯ ನಾಯಕಿಯಾದ ಹರ್ಷಿತಾಳಿಗೆ ಒಪ್ಪಿಸಿದರು.. ಹೇಳದೆ ಇದ್ದವರಿಗೆ ಬೆತ್ತದ ಏಟುಗಳು ಎಂದು ವಿಧಿಸಲಾಗಿತ್ತು...
ಒಂದು ಕಡೆಯಿಂದ ಪ್ರಶ್ನೆ ಕೇಳುತ್ತ ಬಂದವಳು ಭಾವನಾಳ ಬಳಿಗೆ ಬಂದಾಗ ಇದೇ ಸರಿಯಾದ ಸಮಯ ಕೋಪ ತಿರಿಸಿಕೊಳ್ಳಲು ಎಂದು ಪುಸ್ತಕ ಎಲ್ಲ ಹುಡುಕಿ ಕಷ್ಟದ ಮತ್ತು ಅವಳಿಗೆ ಉತ್ತರಿಸಲಾಗದಂತಹ ಪ್ರಶ್ನೆಯನ್ನು ಕೇಳಿದಳು... ಉತ್ತರಿಸಲು ತಡವರಿಸಿದ ಭಾವನಾಳನ್ನು ಪ್ರಶ್ನೆಗೆ ಉತ್ತರ ಹೇಳಲಿಲ್ಲ ಎಂದು ಮೇಷ್ಟ್ರ ಹತ್ತಿರ ಕಳಿಸಿದಳು...
ಹಸಿ ಬೆತ್ತ ಹಿಡಿದು ಕಾಯುತ್ತಿದ್ದ ಮೇಷ್ಟ್ರಿಗೆ ಬೆತ್ತಕ್ಕೆ ಬಲಿಕೊಡುವ ಆಸೆ ಇದ್ದಂತೆ ಕಾಣುತ್ತಿದ್ದರು...
ಏನನ್ನೋ ಹೇಳಲು ತಡವರಿಸುತ್ತಿದ್ದ ಭಾವನಾಳ ಮಾತನ್ನು ಆಲಿಸದೆ ಎರಡು ಕೈಗಳಿಗೆ ಬೀಸಿ ಹೊಡೆದರು... ಚೀರಿದ ಶಬ್ದವು ಅಟ್ಟಹಾಸ ವಿಕೃತಿಯಲ್ಲಿ ಯಾರಿಗೂ ಕೇಳದಂತಾಯಿತು.... ಬೆತ್ತದ ಹೊಡೆತದ ನೋವಿಗಿಂತ ತಪ್ಪೇ ಮಾಡದೆ ಮತ್ತೊಬ್ಬಳ ಕೋಪಕ್ಕೆ ಬಲಿಯಾಗಿ ಶಿಕ್ಷೆ ಅನುಭವಿಸಿದ್ದೇ ಬಹಳ ನೋವಾಗಿತ್ತು......
ತಕ್ಷಣ ಅಮ್ಮನ ನೆನಪಾಯಿತು.. ಮನೆಗೆ ಹೋದ ತಕ್ಷಣ ಅಮ್ಮನ ಹತ್ರ ಹೇಳಿಕೊಂಡು ಹಗುರಾಗಬೇಕೇಂಬ ಹಂಬಲದಿಂದ ಮನೆಯತ್ತ ಸಾಗಿದಳು...
ಮನೆಯ ಬಾಗಿಲು ತೆರೆದಿತ್ತು... ಭಯದಿಂದಲೇ ಒಳಗೆ ಹೋದಳು... ದಿನವೂ ಕೇಳುತ್ತಿದ್ದ ಅಮ್ಮನ ಕಾಲ್ಗೆಜ್ಜೆಯ ದ್ವನಿ, ಪಾತ್ರೆ ತೊಳೆಯುವಾಗ ಮಾಡುತ್ತಿದ್ದ ಕೈ ಬಳೆಯ ಸದ್ದು ಕೇಳಿ ಬರಲಿಲ್ಲ..... !!
ಹಾಗೆ... ಮುಂದೆ ಸಾಗಿದ ಭಾವನಾಳಿಗೆ ಮೂಲೆಯಲ್ಲಿ ಒಂದಷ್ಟು ಒಡೆದು ಬಿದ್ದಿದ್ದ ಅಮ್ಮನ ಕೈಬಳೆಯ ಗಾಜುಗಳು ಕಂಡವು...
ಅನುಮಾನ ಮತ್ತು ಭಯದಿಂದಲೇ ಒಳಕೋಣೆಗೆ ಹೋದ ಭಾವನಾಳಿಗೆ ಕಂಡಿದ್ದು ಮಂಚದ ಮೇಲೆ ಅಳುತ್ತ ಮಲಗಿದ್ದ ಅಮ್ಮ...
ಮಂಚವೇರಿ ಅಮ್ಮನ ಪಕ್ಕ ಕುಳಿತಳು....
ಹೌದು ಅಮ್ಮ ಅಳುತಿದ್ದಳು.. ಜೋರಾಗಿ ಅಳುತಿದ್ದಳು.... ಹಾಗೆ ಭಾವನಾಳ ದೃಷ್ಟಿ ಅಮ್ಮನ ಕೈಗಳ ಹತ್ತಿರ ಹೋಯಿತು.... ಅಮ್ಮನ ಕೈಯಲ್ಲಿ ಗಾಯವಾಗಿತ್ತು...
ಗಾಜಿನ ಬಳೆಗಳಿಂದ ಗೀಚಿ ರಕ್ತದ ಕಲೆ ಮೂಡಿತ್ತು... ಕೆಂಪಾದ ಅಮ್ಮನ ತುಟಿಯು ಊದಿತ್ತು.... ಕಣ್ಣುಗಳು ಅತ್ತು ಅತ್ತು ಉದಿದ್ದವು...
ಅಮ್ಮನ ಸ್ಥಿತಿಗೆ ಕಾರಣ ತಿಳಿಯಿತು...
ಹೌದು, ಇದು ಅಪ್ಪನ ಕೆಲಸ ಎಂದು ಅರ್ಥವಾಗಲು ಸಮಯ ಹಿಡಿಯಲ್ಲಿಲ್ಲ.. ಬೆಳಗ್ಗೆ ನಡೆದಿದ್ದ ಜಗಳದಲ್ಲಿ ಅಪ್ಪ ಅಮ್ಮನಿಗೆ ಹೊಡೆದಿದ್ದ... ಅಪ್ಪನ ಮಾತು ಕೇಳದೆ ಇದ್ದಾಗ ಕೋಪದಲ್ಲಿ ಮಾಡುವ ಕೆಲಸ ಇಂದು ಕಣ್ ಮುಂದೆ ಮೂಡಿತ್ತು....
ತನ್ನ ಸಂತೋಷ- ದುಃಖಗಳನ್ನು ತೋಡಿಕೊಳ್ಳುವದನ್ನ ಮಾತ್ರ ಗೊತ್ತಿದ್ದ ಭಾವನಾಳಿಗೆ ಅಮ್ಮನ ದುಃಖವನ್ನ ಅರಿತುಕೊಳ್ಳುವ ಶಕ್ತಿ ಇರಲಿಲ್ಲ...
ತನ್ನ ಪುಟ್ಟ ಕೈಗಳಿಂದ ಅವಳ ಗಾಯದ ಮೇಲೆ ಒಮ್ಮೆ ಕೈಯಾಡಿಸಿದಳು... ತನಗೆ ತಿಳಿದಂತೆ ಹತ್ತಿಯಿಂದ ರಕ್ತ ಒರೆಸಿದಳು.. ತನೆಗೆ ತಿಳಿದ ಮುಗ್ದ ಭಾವದಲ್ಲೇ ಅಮ್ಮನಿಗೆ ಒಂದಷ್ಟು ಸಮಾದಾನ ಮಾಡಿದಳು...
ಎಲ್ಲೋ ಭಾವನಾಳ ಮನಸಲ್ಲಿ ಅಡಗಿದ್ದ ಒಂದಷ್ಟು ದುಃಖಕ್ಕೆ ಮತ್ತೊಂದಸ್ಟು ದುಃಖ ಬಂದು ಸೇರಿತ್ತು....
ಶತ್ರುವಲ್ಲದ ಅಪ್ಪ... ಸ್ನೇಹಿತೆಯಲ್ಲದ ಅಮ್ಮ ಇಬ್ಬರಲ್ಲೂ ತುಂಬಿದ್ದ ಅವರದೇ ಒಂದಷ್ಟು ಜಗಳದಲ್ಲಿ ತನ್ನ ಮಾತಿಗೆ ಜಾಗವಿಲ್ಲವೆಂದನಿಸಿತು ಭಾವನಾಳಿಗೆ... 

ಮನೆಯ "ಸ್ಮಶಾನ ಮೌನ"ದಲ್ಲಿ ಜೀವಂತ ದುಃಖಕ್ಕೆ ಒಂದು ಗೋರಿ ಕಟ್ಟಿ ಸುಮ್ಮನಾದಳು
....

3 comments:

 1. ನೆನಪುಗಳನ್ನು ಕೆಡಕುತ್ತಾ ಸಾಗುವ ಬರಹ, ವಿಷಾದ ಮಿಡಿಯಿತು ಕಡೆಗೆ. ಕ್ರೌರ್ಯ ಮತ್ತು ಅದು ಉಂಟು ಮಾಡುವ ಮನೋಘಾತ ವಿವರಿಸಲು ಪದಗಳಿಗೆ ಮೀರಿದ್ದು. :(

  http://www.badari-poems.blogspot.in

  ReplyDelete
 2. ನಿಮ್ಮ ಕಥಾವಸ್ತುವಿನ ಆಯ್ಕೆಯೇ ಹಾಗೋ, ಅಥವಾ ಬರವಣಿಗೆಯ ಶೈಲಿಯೇ ಹಾಗೋ, ಮನ ಮುಟ್ಟುತ್ತವೆ ಪೂರ್ಣಿಮಾಜಿ...
  ತುಂಬಾ ಇಷ್ಟವಾಯ್ತು...
  :)

  ReplyDelete